ಕೋರಮಂಗಲ

ಹಾಸನ ಜಿಲ್ಲೆ ಹಾಸನ ತಾಲ್ಲೂಕಿನಲ್ಲಿ ಹಾಸನದಿಂದ ಈಶಾನ್ಯಕ್ಕೆ 11ಕಿಮೀ ದೂರದಲ್ಲಿರುವ ಹಳ್ಳಿ. ಇತಿಹಾಸಪ್ರಸಿದ್ಧ ಸ್ಥಳ. ಇಲ್ಲಿ ಮೂರು ಹೊಯ್ಸಳ ದೇವಾಲಯಗಳಿವೆ. ಇಲ್ಲಿರುವ ಬೂಚೇಶ್ವರ ದೇವಾಲಯ ಹೊಯ್ಸಳ ವಾಸ್ತುಶೈಲಿಯ ಉತ್ತಮ ಕೃತಿ. ಈ ಗುಡಿಯನ್ನು ಬೂಚಿರಾಜ ಎಂಬ ಅಧಿಕಾರಿ 2ನೆಯ ಬಲ್ಲಾಳನ ಸಿಂಹಾಸನಾರೋಹಣದ ನೆನಪಿಗಾಗಿ 1173ರಲ್ಲಿ ಕಟ್ಟಿಸಿದ್ದ. ಇದರಲ್ಲಿ ಗರ್ಭಗೃಹ, ಸುಕನಾಸಿ, ನವರಂಗ ಮತ್ತು ಅದರ ಮುಂದೆ 18 ಕಂಬಗಳಿಂದೆತ್ತಿದ್ದ ಮಹಾಮಂಟಪ ಇವೆ. ಪೂರ್ವಭಾಗದಲ್ಲಿ ಗರ್ಭಗುಡಿಯ ಲಿಂಗದ ನೇರ ಎದುರಾಗಿ ಸೂರ್ಯದೇವರ ಗುಡಿ ಇದೆ. ಪ್ರವೇಶ ದ್ವಾರಗಳು ಮಹಾಮಂಟಪದ ಇಕ್ಕೆಲಗಳಲ್ಲಿವೆ. ಇಡೀ ಘಟಕ  ಎತ್ತರದ ಜಾಗದಲ್ಲಿದೆ. ಇದು ಪ್ರಾಯಶಃ ಜಗತಿಯ ಮೇಲಿರಬೇಕು. 
ಬೂಚೇಶ್ವರ ದೇವಾಲಯದ ಭಿತ್ತಿಶಿಲ್ಪಗಳು

ಹೊರಮೈಯಲ್ಲಿ ಹೊಯ್ಸಳ ಶೈಲಿಗೆ ಸಾಮಾನ್ಯವಾದ ಶಿಲ್ಪಿತ ಅಧಿಷ್ಠಾನಪಟ್ಟಿಕೆಗಳು, ಭಿತ್ತಿಯ ಮೇಲೆ ದೇವಶಿಲ್ಪಗಳು ಇತ್ಯಾದಿ ಇವೆ. ಹೊರಭಾಗದಲ್ಲಿ ಹಾಗೂ ಶಿಖರದಲ್ಲಿ ಶಿಲ್ಪಗಳಿವೆ. ಶಿಖರದ ಪೂರ್ವಭಾಗದಲ್ಲಿ ಬಿಡಿಸಿರುವ ಇಂದ್ರ ಮತ್ತು ಭಿತ್ತಿಯ ಮೇಲಿನ ಅನೇಕ ಶಿಲ್ಪಗಳು ಸೊಬಗಿನವು. ತಿರುಗಣೆಯಲ್ಲಿ ಮಾಡಿದ ದುಂಡುಕಂಬಗಳು, ದ್ವಾರಬಂಧ ಮತ್ತು ಭುವನೇಶ್ವರಿ ಸುಂದರ ರಚನೆಗಳು. ಗರ್ಭಗುಡಿಯ ನೇರ ಎದುರಿಗೆ ಸೂರ್ಯಗುಡಿ ಇದೆ. ಮಹಾಮಂಟಪ ತೆರೆದಿದ್ದು ಸುತ್ತಲೂ ಕP್ಷÁಸನ ಇರುವುದು, ಪಾಶ್ರ್ವದಲ್ಲಿ ದ್ವಾರಗಳಿರುವುದೂ ಈ ದೇವಾಲಯದ ವೈಶಿಷ್ಟ್ಯ. ಈ ಗುಡಿಯ ಈಶಾನ್ಯದಲ್ಲಿ ಇದೇ ಕಾಲದ ಭೈರವನ ಗುಡಿ ಇದೆ. ನಾಗೇಶ್ವರ, ಗೋವಿಂದೇಶ್ವರ ದೇವಾಲಯಗಳು ಬಹು ಶಿಥಿಲವಾಗಿವೆ. ಇವು ಬೂಚೇಶ್ವರ ಗುಡಿಗಿಂತ ಸ್ವಲ್ಪ ಹಳೆಯವು. ಗರ್ಭಗೃಹ, ಸುಕನಾಸಿ, ನವರಂಗಗಳಿರುವ ಈ ದೇವಾಲಯಗಳಲ್ಲಿ ಸುಕನಾಸಿ ತೆರೆದಂತಿರುವುದು ವಿಶೇಷ. ಇತರ ಹೊಯ್ಸಳ ಶೈಲಿಯ ಅಂಶಗಳೆಲ್ಲ ಇವುಗಳಲ್ಲಿ ಇವೆ.			 	  								(ಕೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ